ಮೆನನ್, ಕೇಶವ ಕೆ ಪಿ	
1886 - 1978. ಪ್ರಸಿದ್ಧ ಪತ್ರಿಕೋದ್ಯಮಿ. ಸಮಾಜ ಸುಧಾರಕ ಮತ್ತು ರಾಜಕಾರಣಿ. ಕೇರಳದ ಫಾಲ್ಗಾಟ್‍ನಿಂದ 20 ಕಿಮೀ ದೂರದಲ್ಲಿರುವ ತಾರೂರಿನಲ್ಲಿ 1886 ಸೆಪ್ಟೆಂಬರ್ 1 ರಂದು ಜನಿಸಿದರು. ತಾಯಿ ಮೀನಾಕ್ಷಿ ನಿತೀಯಾರ್; ತಂದೆ ಭೀಮಾನಾಚನ್. ಪ್ರಾಥಮಿಕ ಶಿಕ್ಷಣವನ್ನು ತಾರೂರಿನಲ್ಲಿ ಪಡೆದು ಮಾಧ್ಯಮಿಕ ಶಿಕ್ಷಣವನ್ನು ಆಲತ್ತೂರ್ ಮತ್ತು ಫಾಲ್ಗಾಟ್‍ಗಳಲ್ಲಿ ಮುಂದುವರಿಸಿದರು. ಆ ಬಳಿಕ ಕಲ್ಲಿಕೋಟೆಗೆ ಬಂದು (1898) ಅಂದಿನ ಕೇರಳ ವಿದ್ಯಾಶಾಲೆಯಲ್ಲಿ (ಇಂದಿನ ಗುರುವಾಯೂರಪ್ಪನ್ ಕಾಲೇಜು) ಎಂಟು ವರ್ಷಗಳ ಕಾಲ ಅಧ್ಯಯನ ಮಾಡಿದರು. ಮುಂದೆ ಮೆಟ್ರಿಕ್ ಪರೀಕ್ಷೆ ಪಾಸು ಮಾಡಿದರು (1906). ಅದೇ ವರ್ಷ ಲಕ್ಷ್ಮೀ ಎಂಬುವರನ್ನು ವಿವಾಹವಾದರು. ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಬಿ. ಎ. ಪದವಿ ಪಡೆದು (1912) ಬಾರ್ - ಎಟ್ - ಲಾ ಪದವಿಗಾಗಿ ಇಂಗ್ಲೆಂಡಿಗೆ ತೆರಳಿದರು. 1915 ರಲ್ಲಿ ಬ್ಯಾರಿಸ್ಟರ್ ಆಗಿ ಭಾರತಕ್ಕೆ ಮರಳಿ ಕಲ್ಲಿಕೋಟೆಯಲ್ಲಿ ವಕೀಲಿ ವೃತ್ತಿ ಕೈಗೊಂಡರು.

	ಆ ಸಮಯದಲ್ಲಿ ಐರಿಷ್ ಮಹಿಳೆ ಆನಿಬೆಸೆಂಟ್ (1847 - 1933) ಅವರ ಹೋಮ್‍ರೂಲ್ ಚಳವಳಿಯಿಂದಾಗಿ ಮಲಬಾರಿನಲ್ಲಿ ರಾಜಕೀಯ ಚಟುವಟಿಕೆಗಳು ಪ್ರಾರಂಭವಾಗಿದ್ದವು. 1915ರಲ್ಲಿ ಹೋಮ್‍ರೂಲಿನ ಒಂದು ಶಾಖೆಯನ್ನು ಕಲ್ಲಿಕೋಟೆಯಲ್ಲಿ ಸ್ಥಾಪಿಸಿ ಅದರ ಕಾರ್ಯದರ್ಶಿಯಾಗಿ ಕೇಶವ ಮೆನನ್ ಕೆಲಸ ಮಾಡಿದರು. ಜೊತೆಗೆ ಆಗಿನ ಮಲಬಾರಿನ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯೂ ಆಗಿದ್ದರು. ಕಲ್ಲಿಕೋಟೆಯಿಂದ ಮದರಾಸಿಗೆ ತೆರಳಿ ಅಲ್ಲಿ ಕಾರ್ಮಿಕರ ಸಂಘದ ಅಧ್ಯಕ್ಷರಾಗಿ ಕಾರ್ಮಿಕರ ಸಂಘಟನೆಯಲ್ಲಿ ಅಪಾರ ಶ್ರಮ ವಹಿಸಿದ್ದಲ್ಲದೆ ನಿಯೊ - ಫೆಬೀಯನ್ ಸೊಸೈಟಿಯ ಸ್ಥಾಪನೆಗೂ ಕಾರಣರಾದರು.

	ಮೆನನ್ ಅವರು ಕಲ್ಲಿಕೋಟೆಗೆ ಮರಳಿ (1921) ವಕೀಲಿವೃತ್ತಿ ತೊರೆದು ರಾಜಕೀಯ ರಂಗಕ್ಕೆ ಇಳಿದರು. ಮಲಬಾರಿನಲ್ಲಿ ನಡೆದ ಮಾಪುಳ್ಳ ದಂಗೆಯ ಸಂದರ್ಭದಲ್ಲಿ ಹಳ್ಳಿಹಳ್ಳಿಗೂ ಹೋಗಿ ಜನರ ಕುಂದುಕೊರತೆಗಳನ್ನು ವಿಚಾರಿಸಿ ಅವುಗಳ ನಿವಾರಣೆಗಾಗಿ ಯುಕ್ತ ಮಾರ್ಗದರ್ಶನ ನೀಡಿದರು.

	ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುಟ್ಟಿದ ಪ್ರಮುಖ ಭಾಷಾ ಪತ್ರಿಕೆಗಳಲ್ಲಿ ಮಾತೃಭೂಮಿ ಹೆಸರಾದದ್ದು. ಈ ಪತ್ರಿಕೆಯ ಪ್ರಕಟಣೆಗಾಗಿ ಕೇಶವ ಮೆನನ್ನರು ತಮ್ಮ ಸಹಚರರಾದ ಕೆ. ಮಾಧವನ್ ನಾಯರ್, ನಂಬೂದ್ರಿಪಾದ್, ಎ. ಕೆ. ಮೆನನ್, ಎ. ಆರ್. ಮೆನನ್, ಪಿ. ಅಚ್ಚುತನ್ ಇವರೊಡನೆ ಕೂಡಿ ಒಂದು ಖಾಸಗಿ ಕಂಪನಿ ಸ್ಥಾಪಿಸಿದರು (15 - 2 - 1922). ಈ ಪತ್ರಿಕೆಯ ಬಂಡವಾಳಕ್ಕೆಂದು ಐದು ರೂಪಾಯಿಗೆ ಒಂದು ಷೇರಿನಂತೆ ಸುಮಾರು 20,000 ಷೇರುಗಳನ್ನು ಮಾರಾಟ ಮಾಡಲಾಯಿತು. ಕಲ್ಲಿಕೋಟೆಯಲ್ಲಿ ಎಂಪ್ರೆಸ್ ವಿಕ್ಟೋರಿಯ ಎಂಬ ಮುದ್ರಣಾಲಯವನ್ನು ಮಾತೃಭೂಮಿಯ ಮುದ್ರಣಕ್ಕಾಗಿ ರೂ. 15,000 ವೆಚ್ಚದಲ್ಲಿ ಕೊಳ್ಳಲಾಯಿತು. ಕೇಶವ ಮೆನನ್ ಮಾತೃಭೂಮಿ ಪತ್ರಿಕೆಯ ಪ್ರಥಮ ಸಂಪಾದಕರಾದರು (1923). ಹೀಗಾಗಿ ಕೇಶವ ಮೆನನ್ ಅವರನ್ನು ಮಾತೃಭೂಮಿಯ ಶಿಲ್ಪಿ ಎಂದೇ ಕರೆಯಲಾಗಿದೆ. ಪ್ರಾರಂಭದಲ್ಲಿ ತ್ರೈವಾರ ಪತ್ರಿಕೆಯಾಗಿ ಹೊರಬಂದ ಈ ಪತ್ರಿಕೆ ಅನಂತರ ದಿನ ಪತ್ರಿಕೆಯಾಗಿ ಜನಪ್ರಿಯತೆ ಗಳಿಸಿತು. ಮಾತೃಭೂಮಿ ಪತ್ರಿಕೆಗೆ ಮಲಯಾಳಿ ಭಾಷಾ ಪತ್ರಿಕೋದ್ಯಮದಲ್ಲಿ `ಒಂದು ಚಾರಿತ್ರಿಕ ಸ್ಥಾನವನ್ನು ಒದಗಿಸಲು ಮೆನನ್ ಕಾರಣರಾದರು. ಇವರನ್ನು ಮಲಯಾಳಿ ಭಾಷಾ ಪತ್ರಿಕೋದ್ಯಮದ ಪಿತಾಮಹ ಎಂದು ಕರೆಯಲಾಗಿದೆ.

	ಕೇಶವ ಮೆನನ್ ಕೇವಲ ಪತ್ರಿಕೋದ್ಯಮಿಯಾಗಿರಲಿಲ್ಲ; ಸಮಾಜ ಸುಧಾರಕರೂ ಆಗಿದ್ದರು. ವೈಕಮ್ ದೇವಸ್ಥಾನದ ಅಸ್ಪøಶ್ಯತಾ ನೀತಿಯನ್ನು ವಿರೋಧಿಸಿ ಸತ್ಯಾಗ್ರಹ ನಡೆಸಿದ ಇವರನ್ನು 1924 ಏಪ್ರಿಲ್ 7 ರಂದು ಬಂಧಿಸಿ ಆರು ತಿಂಗಳ ಅವಧಿಗೆ ಕಾರಾಗೃಹದಲ್ಲಿಡಲಾಯಿತು. ಈ ಅವಧಿಯಲ್ಲಿ ಪಿ. ರಮಣಿ ಮೆನನ್ ಎಂಬವರು ಮಾತೃಭೂಮಿಯ ಸಂಪಾದಕರಾಗಿ ಕೆಲಸ ಮಾಡಿದರು.

	ಮಾತೃಭೂಮಿ ಪತ್ರಿಕೆಯ ಸಂಪಾದಕತ್ವದಿಂದ ತಾತ್ಕಾಲಿಕವಾಗಿ ಬೇರ್ಪಟ್ಟು ಕೇಶವ ಮೆನನ್ ಮದರಾಸಿನಲ್ಲಿ 1925 ರಲ್ಲಿ ವಕೀಲಿವೃತ್ತಿಯನ್ನು ಮತ್ತೆ ಕೈಗೊಂಡರು. ಅವರ ಮೊದಲನೆಯ ಪತ್ನಿಯ ಸಹೋದರಿ ಅಮ್ಮು ಎಂಬುವರು ಎರಡು ಮಕ್ಕಳ ತಾಯಿ ಹಾಗೂ ವಿಧವೆ. ಈಕೆಯನ್ನು ಮೆನನ್ 1925ರಲ್ಲಿ ಮದುವೆಯಾದರು.

	ಮೆನನ್ 1927ರಲ್ಲಿ ಸಂಸಾರ ಸಮೇತ ಮಲಯಕ್ಕೆ ತೆರಳಿದರು. ಅಲ್ಲೂ ಇವರಿಗೆ ಆರ್ಥಿಕ ಬವಣೆ ತಪ್ಪಲಿಲ್ಲ. ಮುಂದೆ 1927ರಲ್ಲಿ ಸಿಂಗಪುರಕ್ಕೆ ತೆರಳಿ ಅಲ್ಲೂ ವಕೀಲಿ ವೃತ್ತಿಯನ್ನು ಕೈಗೊಂಡರು. ಜೊತೆಗೆ ಅಲ್ಲಿಯ ಭಾರತೀಯ ಸಂಘ ಸಂಸ್ಥೆಗಳಲ್ಲಿ ಮತ್ತು ಕಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದುದೂ ಉಂಟು. ಎರಡನೆಯ ಮಹಾಯುದ್ಧದಲ್ಲಿ ಜಪಾನ್ ಸಿಂಗಪುರವನ್ನು ವಶಪಡಿಸಿಕೊಂಡಾಗ ಸರ್ಕಾರದ ಅತಿಥಿಯಾಗಿ ಜಪಾನಿಗೆ ಭೇಟಿಕೊಟ್ಟರು. ಭಾರತೀಯ ಸ್ವಾತಂತ್ರ್ಯಲೀಗ್‍ನ ಶಾಖೆಗಳನ್ನು ಸಿಂಗಪುರದಲ್ಲಿ ತೆರೆದರು. ಅಲ್ಲಿಯ ಪತ್ರಿಕೆಗಳಿಗೂ ಲೇಖನಗಳನ್ನು ಬರೆಯಲು ಪ್ರಾರಂಭಿಸಿದರು. ಇವರ ಕ್ರಾಂತಿಕಾರಿ ಚಟುವಟಿಕೆಗಳಿಂದಾಗಿ ಜಪಾನ್ ಸರ್ಕಾರ ಇವರನ್ನು ಬಂಧಿಸಿತು (24-4-1944). ಮರಣ ದಂಡನೆಗೆ ಗುರಿಯಾಗಬೇಕಾಗಿದ್ದು ಅದೃಷ್ಟವಶಾತ್ ತಪ್ಪಿ ಆರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯಾಯಿತು.

	ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ಅನಂತರ ಮೆನನ್ ಬಿಡುಗಡೆ ಹೊಂದಿ 1948 ಆಗಸ್ಟ್ 2 ರಂದು ಮತ್ತೆ ಮಾತೃಭೂಮಿ ಪತ್ರಿಕೆಯ ಸಂಪಾದಕರಾದರು. ಸಾರ್ವಜನಿಕ ಕ್ಷೇತ್ರಗಳಲ್ಲಿ ಇವರು ಮಾಡಿದ ಗಣನೀಯ ಸೇವೆಗಳನ್ನು ಗುರುತಿಸಿದ ಭಾರತ ಸರ್ಕಾರ 1951ರಲ್ಲಿ ಮೆನನ್ ಅವರನ್ನು ಸಿಲೋನಿಗೆ ರಾಯಭಾರಿಯಾಗಿ ನೇಮಕ ಮಾಡಿತು. ಆದರೆ ಸೇವೆಯಲ್ಲಿದ್ದಾಗಲೇ ಮೆನನ್ ಅವರಿಗೂ ಭಾರತ ಸರ್ಕಾರಕ್ಕೂ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿ ತಮ್ಮ ರಾಯಭಾರಿ ಹುದ್ದೆಗೆ 1952 ರಲ್ಲಿ ರಾಜೀನಾಮೆ ನೀಡಿದರು. ಮತ್ತೆ ಮಾತೃಭೂಮಿ ಪತ್ರಿಕೆಯ ಸಂಪಾದಕತ್ವವನ್ನು ವಹಿಸಿದರು. ಕ್ಯಾನ್ಸರ್ ಕಾಯಿಲೆಯಿಂದ ನರಳುತ್ತಿದ್ದ ಇವರ ಪತ್ನಿ ಅಮ್ಮು ನಿಧನ ಹೊಂದಿದರು (1954).

	ಮಲಯಾಳಮ್ ಸಾಹಿತ್ಯದಲ್ಲಿ ಕೇಶನ ಮೆನನ್ ಅವರದು ಚಾರಿತ್ರಿಕ ಸ್ಥಾನ. 1955 ರಲ್ಲಿ ದಕ್ಷಿಣ ಭಾಷಾ ಪುಸ್ತಕದತ್ತಿಯನ್ನು ಸ್ಥಾಪಿಸಿ ಮಲಯಾಳಮ್, ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಪುಸ್ತಕಗಳನ್ನು ಕಡಿಮೆ ವೆಚ್ಚದಲ್ಲಿ ಪ್ರಕಟಿಸಲು ಅವಕಾಶ ಮಾಡಿಕೊಟ್ಟರು. ಮೆನನ್ 1957-62ರ ತನಕ ಕೇರಳ ಸಾಹಿತ್ಯ ಅಕಾಡೆಮಿಯ ಕಾರ್ಯಕಾರಿ ಅಧ್ಯಕ್ಷರಾಗಿದ್ದರು. ಇವರ ಆತ್ಮಚರಿತ್ರೆ ಕಳಿಜ್ಞ ಕಾಲಂ ಎಂಬ ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ದೊರೆತಿದೆ. ಭಾರತ ಸರ್ಕಾರ ಮೆನನರಿಗೆ 1966 ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. ಕೇರಳ ಸಾಹಿತ್ಯ ಅಕಾಡೆಮಿಯ ಫೆಲೊ ಆಗಿ ಮೆನನ್‍ರನ್ನು ಗೌರವಿಸಲಾಗಿತ್ತು (1970). ಮೆನನ್ 1978 ನವೆಂಬರ್ 9ರಂದು ತೀರಿಕೊಂಡರು.					        
  (ಎನ್.ಯು.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ